ಪಂಚ್‌ನಿಂದ ಫ್ರಾಂಕ್ಸ್‌ವರೆಗೂ ₹10 ಲಕ್ಷ ಒಳಗಿನ SUVಗಳಿವು…

ಮೈಕ್ರೊ ಎಸ್‌ಯುವಿಗಳು

ಭಾರತದ ಕಾರು ಮಾರುಕಟ್ಟೆಯಲ್ಲಿ ಸದ್ಯದ ಜನರ ಬೇಡಿಕೆ ಎಂದರೆ ಒಂದು SUV ಹೊಂದುವುದು. ಒಂದು ಕಾಲದಲ್ಲಿ ಹ್ಯಾಚ್‌ಬ್ಯಾಕ್ ಕಾರುಗಳ ಸ್ವರ್ಗ ಎಂದೇ ಕರೆಯಿಸಿಕೊಳ್ಳುತ್ತಿದ್ದ ಭಾರತ, ಈಗ ಎಸ್‌ಯುವಿ ಬೆನ್ನು ಹತ್ತಿದೆ. ಹೀಗಾಗಿ ಎಲ್ಲಾ ಕಾರು ತಯಾರಿಕಾ ಕಂಪನಿಗಳೂ ಎಸ್‌ಯುವಿ ಹೋಲುವ ಕಾರುಗಳನ್ನೇ ಉತ್ಪಾದಿಸಲು ಪ್ರಾರಂಭಿಸಿವೆ.

ಭಾರತದಲ್ಲಿ ಹ್ಯಾಚ್‌ಬ್ಯಾಕ್ ಕಾರುಗಳನ್ನು ಖರೀದಿಸುವವರ ಸಂಖ್ಯೆ ಕ್ಷೀಣಗೊಂಡಿದ್ದರಿಂದ, ಈ ಮಾರುಕಟ್ಟೆಯೇ ಈಗ ಕುಸಿದುಹೋಗಿದೆ. ಹೀಗಾಗಿ ಹ್ಯಾಚ್‌ಬ್ಯಾಕ್‌ಗಳ ಜಾಗದಲ್ಲಿ ಎಸ್‌ಯುವಿಗಳು ರಾಜ್ಯಭಾರ ಮಾಡುತ್ತಿವೆ. ಹೀಗಾಗಿ ಮೊದಲ ಕಾರು ಖರೀದಿಸುವ ಮಧ್ಯಮ ವರ್ಗದವರ ಮನಕ್ಕೊಪ್ಪುವಂತೆ ₹10 ಲಕ್ಷದೊಳಗಿನ ಎಸ್‌ಯುವಿ ಕಾರುಗಳ ತಯಾರಿಕೆಯಲ್ಲಿ ಕಂಪನಿಗಳು ನಿರತವಾಗಿವೆ. ಇವುಗಳಲ್ಲಿ ಪ್ರಮುಖ ಎಸ್‌ಯುವಿ ಕಾರುಗಳು ಹೀಗಿವೆ…

ಟಾಟಾ ಪಂಚ್

ಬೆಲೆ: ₹5.99ಲಕ್ಷದಿಂದ (ಎಕ್ಸ್ ಶೋರೂಂ)

ಭಾರತದ ಅತಿ ಹೆಚ್ಚು ಮಾರಾಟವಾಗುತ್ತಿರುವ ಎಸ್‌ಯುವಿಗಳಲ್ಲಿ ಟಾಟಾ ಪಂಚ್‌ ಕೂಡಾ ಒಂದು. ಇದರ ಉತ್ಪಾದನೆಯಲ್ಲಿ ಬಳಸಿರುವ ಪರಿಕರಗಳ ಗುಣಮಟ್ಟ ಉತ್ತಮವಾಗಿರುವುದರಿಮದ ಇದಕ್ಕೆ ಬೇಡಿಕೆಯೂ ಹೆಚ್ಚು. ಈ ಕಾರಿನ ಬೆಲೆ ₹5.99 ಲಕ್ಷದಿಂದ ಆರಂಭವಾಗುತ್ತದೆ.

ಕಾರಿನ ಒಳಾಂಗಣದಲ್ಲಿ ಗುಣಮಟ್ಟದ ಉಪಕರಣಗಳ ಬಳಕೆಯ ಜತೆಗೆ, ಹಿತವೆನಿಸುವ ವಿನ್ಯಾಸ ಮತ್ತು ವಸ್ತುಗಳನ್ನು ಬಳಸಲಾಗಿದೆ. ಸಾಮನು ಸರಂಜಾಮು ಇಡಲು ಸ್ಥಳಾವಕಾಶ, ದೊಡ್ಡ ಕಿಟಕಿಗಳಿಂದ ಕಾರಿನೊಳಗೆ ಗಾಳಿ, ಬೆಳಕಿಗೆ ಹೆಚ್ಚು ಜಾಗ ಇರುವುದರಿಂದ ಕಾರು ದೊಡ್ಡದೆನಿಸುತ್ತದೆ. 7 ಇಂಚಿನ ಇನ್ಫೊಟೈನ್ಮೆಂಟ್ ಸಿಸ್ಟಂ, ಸಂಪೂರ್ಣ ಡಿಜಿಟಲ್ ಕ್ಲಸ್ಟರ್‌, ಆ್ಯಟೊಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಪುಷ್ ಬಟ್ಟನ್‌ ಸ್ಟಾರ್ಟ್‌, ಆಟೊ ಹೆಡ್‌ಲ್ಯಾಂಪ್‌ಗಳು ಇತ್ಯಾದಿ ಇದರ ಇತರ ವೈಶಿಷ್ಟ್ಯಗಳು. ಪೆಟ್ರೋಲ್‌ ಎಂಜಿನ್ ಮಾದರಿಯಲ್ಲಿ ಲಭ್ಯವಿರುವ ಈ ಕಾರು 1.2 ಲೀ ಯೂನಿಟ್ ಹೊಂದಿದೆ. 85 ಅಶ್ವಶಕ್ತಿ ಉತ್ಪಾದಿಸಬಲ್ಲದು. 5 ಸ್ಪೀಡ್‌ ಮ್ಯಾನ್ಯುಯಲ್ ಗೇರ್‌ ಹೊಂದಿದೆ. ಪ್ರತಿ ಲೀಟರ್ ಪೆಟ್ರೋಲ್‌ಗೆ 18.97 ಕಿ.ಮೀ. ಇಂಧನ ಕ್ಷಮತೆ ಹೊಂದಿದೆ.

ಹ್ಯುಂಡೈ ಎಕ್ಸ್‌ಟೆರ್

ಬೆಲೆ: ₹6.12 ಲಕ್ಷದಿಂದ (ಎಕ್ಸ್ ಶೋರೂಂ)

ಹ್ಯುಂಡೈ ಎಕ್ಸ್‌ಟೆರ್‌ ಮತ್ತೊಂದು ಕೈಗೆಟಕುವ ಬೆಲೆಗೆ ಸಿಗುವ ಎಸ್‌ಯುವಿ. ಇದರ ಬೆಲೆ ₹6.13 ಲಕ್ಷದಿಂದ ಆರಂಭ. ಹ್ಯುಂಡೈ ಎಕ್ಸ್‌ಟೆರ್‌ ಮೂರು ಎಂಜಿನ್‌ ಆಯ್ಕೆಯಲ್ಲಿ ಲಭ್ಯ. 1.2 ಲೀಟರ್ ಕಪ್ಪಾ ಪೆಟ್ರೋಲ್ ಎಂಜಿನ್. ಇದು ಈಗಾಗಲೇ ಇ20 ಕಾರಿನಲ್ಲಿದೆ. 5 ಮ್ಯಾನ್ಯುಯಲ್ ಗೆರ್‌ ಅಥವಾ ಆ್ಯಟೊಮ್ಯಾಟಿಕ್‌ ಗೇರ್‌ನಲ್ಲಿ ಲಭ್ಯ. ಮತ್ತೊಂದು ಆಯ್ಕೆಯಲ್ಲಿ 1.2 ಲೀಟರ್‌ ಪೆಟ್ರೋಲ್‌–ಸಿಎನ್‌ಜಿ ಎಂಜಿನ್‌ನಲ್ಲೂ ಲಭ್ಯ. ಇದೂ 5 ಸ್ಪೀಡ್‌ ಮ್ಯಾನ್ಯುಯಲ್ ಗೇರ್‌ಬಾಕ್ಸ್‌ನಲ್ಲಿ ಲಭ್ಯ.

ಈ ಮೈಕ್ರೊ ಸೌಲಭ್ಯಗಳನ್ನು ಗಮನಿಸುವುದಾದರೆ,,, ಧ್ವನಿ ಮೂಲಕವೇ ಕಾರ್ಯಾಚರಣೆ ನಡೆಸುವ ಸ್ಮಾರ್ಟ್ ಎಲೆಕ್ಟ್ರಿಕ್ ಸನ್‌ರೂಫ್‌ ಹಾಗೂ ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಇರುವ ಡ್ಯಾಶ್‌ಕ್ಯಾಮ್‌, 5.84 ಸೆಂ.ಮೀ. ದೊಡ್ಡದಾದ ಎಲ್‌ಸಿಡಿ ಡಿಸ್‌ಪ್ಲೇ, ಸ್ಮಾರ್ಟ್‌ಫೋನ್‌ ಆ್ಯಪ್‌ ಆಧಾರಿತ ಸಂಪರ್ಕ ಹಾಗೂ ಬಹುಆಯ್ಕೆಯ ರೆಕಾರ್ಡಿಂಗ್ ಮೋಡ್‌ ಇದರಲ್ಲಿದೆ. ಇವೆಲ್ಲದರ ಜತೆಗೆ 26 ಸುರಕ್ಷತಾ ಸೌಕರ್ಯಗಳು ಎಕ್ಸ್‌ಟೆರ್‌ನಲ್ಲಿವೆ.

ರಿನೊ ಕಿಗರ್‌/ ನಿಸ್ಸಾನ್ ಮ್ಯಾಗ್ನೈಟ್‌

ಬೆಲೆ: ₹5.99 ಲಕ್ಷದಿಂದ (ಎಕ್ಸ್‌ ಶೋರೂಂ)

ರಿನೊ ಕಿಗರ್‌ ಹಾಗೂ ನಿಸ್ಸಾನ್‌ ಮ್ಯಾಗ್ನೈಟ್‌ ಎರಡೂ ಒಂದೇ ಪ್ಲಾಟ್‌ಫಾರ್ಮ್‌ ಹಂಚಿಕೊಳ್ಳುವ ಬಹು ಆಯ್ಕೆಯ ಕಾರುಗಳಿವು. ಎರಡೂ ಕಾರುಗಳು 1 ಲೀ. ಟರ್ಬೊ ಪೆಟ್ರೋಲ್‌ ಅಥವಾ 1ಲೀ ನೈಸರ್ಗಿಕ ಪೆಟ್ರೋಲ್ ಎಂಜಿನ್‌ಗಳನ್ನು ಹೊಂದಿದೆ. ಈ ಎರಡೂ ಎಸ್‌ಯುವಿಗಳು 5 ಸ್ಪೀಡ್‌ ಮ್ಯಾನ್ಯುಯಲ್ ಗೇರ್ ಬಾಕ್ಸ್‌ ಹೊಂದಿದೆ. ಸಿವಿಟಿ ಮತ್ತು 5 ಸ್ಪೀಡ್ ಈಸಯ ಆರ್‌–ಎಎಂಟಿ ಗೇರ್‌ ಆಯ್ಕೆಯೂ ಇದೆ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಕಿಗರ್ ಮತ್ತು ಮ್ಯಾಗ್ನೈಟ್‌ ಎರಡೂ ನಾಲ್ಕು ಏರ್‌ಬ್ಯಾಗ್‌ ಹೊಂದಿದೆ. ಇದರಲ್ಲಿ ಚಾಲಕ ಹಾಗೂ ಮುಂಭಾಗದ ಪ್ರಯಾಣಿಕರಿಗೆ ಇದರ ಪ್ರಯೋಜನವಾಗಲಿದೆ.

ಮಹೀಂದ್ರ 3XO
ಮಹೀಂದ್ರ 3XO

ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ

ಬೆಲೆ: ₹7.49 ಲಕ್ಷದಿಂದ (ಎಕ್ಸ್‌ ಶೋರೂಂ)

ಮಹೀಂದ್ರಾ ಇತ್ತೀಚೆಗೆ ಪರಿಚಯಿಸಿದ ಮೈಕ್ರೊ ಎಸ್‌ಯುವಿ XUV 3XO. ಇದರ ಎಕ್ಸ್‌ ಶೋರೂಂ ಬೆಲೆ ₹7.49 ಲಕ್ಷ. ಈ ಹಿಂದೆ ಇದ್ದ ಎಕ್ಸ್‌ಯುವಿ 300ರ ಹೊಸ ಅವತರಣಿಕೆಯೇ ಈ ಕಾರು. ಹೊಸ ಬಗೆಯ ಸೌಕರ್ಯಗಳುಳ್ಳ ಫೀಚರ್ಸ್‌, ಹೆಚ್ಚು ಆರಾಮ ಹಾಗೂ ಕಾರಿನ ನೋಟ ಎಲ್ಲವೂ ಆಧುನಿಕ ಶೈಲಿಗೆ ತಕ್ಕಂತಿದೆ. ಎಂಜಿನ್‌ ಆಯ್ಕೆಯೂ ಇರುವುದರಿಂದ ಹೆಚ್ಚಿನ ಗ್ರಾಹಕರನ್ನು ಇದು ಸೆಳೆಯುತ್ತಿದೆ. 1.2ಲೀ ಟರ್ಬೊ ಪೆಟ್ರೋಲ್ ಎಂಜಿನ್‌ 109 ಅಶ್ವಶಕ್ತಿ ಮತ್ತು 200 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. 1.5ಲೀ ಡೀಸೆಲ್ ಎಂಜಿನ್‌ 115 ಅಶ್ವಶಕ್ತಿ ಹಾಗೂ 300 ಎನ್‌ಎಂ ಟಾರ್ಕ್ ಉತ್ಪಾದಿಸಬಲ್ಲದು. ಇದರಲ್ಲೇ ಮತ್ತೊಂದು ಆಯ್ಕೆ ಎಂದರೆ 1.2 ಲೀಟರ್ ಟಿಜಿಡಿಐ ಟರ್ಬೊ ಪೆಟ್ರೋಲ್ ಎಂಜಿನ್‌ 128 ಅಶ್ವಶಕ್ತಿ ಹಾಗೂ 230 ಎನ್‌ಎಂ ಟಾರ್ಕ್ ಉತ್ಪಾದಿಸುವ ಶಕ್ತಿಶಾಲಿ ಎಂಜಿನ್ ಹೊಂದಿದೆ. ಈ ಎಲ್ಲಾ ಎಂಜಿನ್‌ಗಳು 6 ಗೇರ್‌ಗಳುಳ್ಳ ಮ್ಯಾನ್ಯುಯಲ್ ಗೇರ್‌ ಬಾಕ್ಸ್ ಹೊಂದಿದೆ. ಜತೆಗೆ ಟರ್ಬೊ ಪೆಟ್ರೋಲ್ ಎಂಜಿನ್‌ ಹೊಂದಿರುವ ಕಾರಿನಲ್ಲಿ 6 ಸ್ಪೀಡ್‌ನ ಆ್ಯಟೊಮ್ಯಾಟಿಕ್‌ ಗೇರ್‌ ಬಾಕ್ಸ್‌ ಸೌಲಭ್ಯವಿದೆ. ಡೀಸಲ್‌ ಮಾದರಿಯ ಕಾರಿನಲ್ಲೂ 6 ಗೇರ್‌ಗಳುಳ್ಳ ಆ್ಯಟೊಮ್ಯಾಟಿಕ್ ಗೇರ್‌ ಬಾಕ್ಸ್‌ ಇದೆ.

ಹ್ಯುಂಡೈ ವೆನ್ಯೂ

ಬೆಲೆ: ₹7.94 ಲಕ್ಷದಿಂದ (ಎಕ್ಸ್‌ಶೋರೂಂ)

ಹ್ಯುಂಡೈ ವೆನ್ಯೂ ಭಾರತದಲ್ಲಿ ಅತಿ ಹೆಚ್ಚು ಗ್ರಾಹಕರು ಬಯಸುವ ಒಂದು ಕಾರುಗಳಲ್ಲಿ ಒಂದು. ಎರಡು ಪೆಟ್ರೋಲ್ ಸಹಿತ ಮೂರು ಎಂಜಿನ್‌ಗಳ ಆಯ್ಕೆಯಲ್ಲಿ ಇದು ಲಭ್ಯ. 82 ಬಿಎಚ್‌ಪಿ 1.2 ಲೀ. ಪೆಟ್ರೋಲ್ ಹಾಗೂ 118 ಬಿಎಚ್‌ಪಿ 1 ಲೀಟರ್ ಟರ್ಬೊ ಪೆಟ್ರೋಲ್‌ ಮಾದರಿಯಲ್ಲಿ ಸಿಗಲಿದೆ. ಇದರೊಂದಿಗೆ 1.5 ಲೀ ಡೀಸೆಲ್ ಎಂಜಿನ್‌ ಕೂಡಾ ಇದರಲ್ಲಿ ಲಭ್ಯ. ಇದು 115 ಬಿಎಚ್‌ಪಿ ಹಾಗೂ 250 ಎನ್ಎಂ ಟಾರ್ಕ್ ಉತ್ಪದಿಸಬಲ್ಲದು. ಈ ಎಲ್ಲಾ ಎಂಜಿನ್‌ಗಳೂ ಮ್ಯಾನ್ಯುಯಲ್ ಟ್ರಾನ್ಸಿಮಿಷನ್‌ ಹಾಗೂ ಏಳು ಸ್ಪೀಡ್‌ನ ಡಿಸಿಟಿ ಮತ್ತು ಆರು ಸ್ಪೀಡ್‌ನ ಐಎಂಟಿ (ಪೆಟ್ರೋಲ್‌ ಎಂಜಿನ್‌ನೊಂದಿಗೆ ಮಾತ್ರ) ಲಭ್ಯ.

ಮಾರುತಿ ಸುಜುಕಿ ಫ್ರಾಂಕ್ಸ್‌

ಬೆಲೆ: ₹7.51 ಲಕ್ಷದಿಂದ (ಎಕ್ಸ್ ಶೋರೂಂ)

ಸದ್ಯ ರಸ್ತೆಯಲ್ಲಿ ಕಾಣಿಸುವ ಹೊಸ ಮಾದರಿಯ ಕಾರು ಎಂದರೆ ಮಾರುತಿ ಸುಜುಕಿ ಫ್ರಾಂಕ್ಸ್‌. 1.0 ಲೀ ಕೆ–ಸಿರೀಸ್ ಬೂಸ್ಟರ್‌ಜೆಟ್ ಪೆಟ್ರೋಲ್ ಎಂಜಿನ್‌ ಇದು ಹೊಂದಿದೆ. 1.2ಲೀ. ಕೆ12 ಪೆಟ್ರೋಲ್‌ ಎಂಜಿನ್‌ ಆಯ್ಕೆಯೂ ಇದು, ಬಹಳಷ್ಟು ಗ್ರಾಹಕರನ್ನು ಇದು ಸೆಳೆಯುತ್ತಿದೆ. ಹೆಡ್‌ಅಪ್‌ ಡಿಸ್‌ಪ್ಲೇ, ಟರ್ನ್ ಬೈ ಟರ್ನ್‌ ನ್ಯಾವಿಗೇಷನ್‌, 360 ವ್ಯೂ ಕ್ಯಾಮೆರಾ, ವೈರ್‌ಲೆಸ್‌ ಸ್ಮಾರ್ಟ್‌ಫೋನ್‌ ಚಾರ್ಜರ್‌, 9 ಇಂಚಿನ ಎಚ್‌ಡಿ ಸ್ಮಾರ್ಟ್‌ ಪ್ಲೇ ಪ್ರೊ+ ಇನ್ಫೋಟೈನ್ಮೆಂಟ್‌ ಸಿಸ್ಟಂ ಇದ್ದು, ಇದಕ್ಕೆ ವೈರ್‌ಲೆಸ್‌ ಆ್ಯಪಲ್ ಕಾರ್‌ಪ್ಲೇ ಹಾಗೂ ಆ್ಯಂಡ್ರಾಯ್ಡ್‌ ಆಟೊ ಕನೆಕ್ಟಿವಿಟಿ ಸೌಕರ್ಯವೂ ಇದೆ. ಫ್ರಾಂಕ್ಸ್‌  10ಕ್ಕೂ ಹೆಚ್ಚು ಬಣ್ಣಗಳಲ್ಲಿ ಲಭ್ಯ. ಇವುಗಳಲ್ಲೂ ಏಕ ಬಣ್ಣದ ಹಾಗೂ ಎರಡು ಬಣ್ಣದ ಆಯ್ಕೆಯೂ ಇದೆ.

ಕಿಯಾ ಸೊನೆಟ್‌

ಬೆಲೆ: ₹7.99 ಲಕ್ಷದಿಂದ (ಎಕ್ಸ್ ಶೋರೂಂ)

ಹಲವು ಹೊಸತುಗಳೊಂದಿಗೆ ಯುವ ಸಮುದಾಯವನ್ನು ಆಕರ್ಷಿಸುತ್ತಿರುವ ಕಾರು ಕಿಯಾ ಸೊನೆಟ್‌. ತನ್ನ ಸಿಗ್ನೇಚರ್‌ ಟೈಗರ್‌ ನೋಸ್‌ ಗ್ರಿಲ್‌ನಿಂದಲೇ ಇದು ಹೆಚ್ಚು ಆಕರ್ಷಿತು. ಅದರೊಳಗೆ ಎಲ್‌ಇಡಿ ಹೆಡ್‌ಲ್ಯಾಂಪ್ಸ್‌ ಮತ್ತು ಇಂಟಿಗ್ರೇಟೆಡ್‌ ಡಿಆರ್‌ಎಲ್‌ ಕಾರಿನ ನೋಟಕ್ಕೆ ಇನ್ನಷ್ಟು ಸೊಬಗು ಬೆರೆಸಿದೆ. 16 ಇಂಚಿನ ಕ್ರಿಸ್ಟಲ್ ಕಟ್‌ ಅಲಾಯ್‌ ಕಾರಿನ ಅಂದಕ್ಕೆ ಮತ್ತೊಂದು ಗರಿ. ಎರಡು ಆಕರ್ಷಕ ಬಣ್ಣಗಳ ಕ್ಯಾಬಿನ್‌, ದೊಡ್ಡದಾದ ಟಚ್‌ ಸ್ಕ್ರೀನ್‌, ರಿಮೋಟ್‌ ಸ್ಟಾರ್ಟ್‌, ಶಬ್ದ ಗ್ರಹಿಸುವ ದೀಪ.. ಇವೆಲ್ಲವೂ ಸೂಜಿಗಲ್ಲಿನಂತೆ ಸೆಳೆಯುವ ಲಕ್ಷಣಗಳಾಗಿವೆ.

ಟಾಟಾ ನೆಕ್ಸಾನ್‌

ಬೆಲೆ: ₹7.99 ಲಕ್ಷದಿಂದ (ಎಕ್ಸ್ ಶೋರೂಂ)

ಟಾಟಾ ಕಾರು ಉತ್ಪನ್ನಗಳಲ್ಲಿ ಅತಿ ಹೆಚ್ಚು ಮಾರಾಟವಾಗುವ ಪಂಚ್‌ ನಂತರದ ಸ್ಥಾನ ನೆಕ್ಸಾನ್‌ಗೆ ಸೇರುತ್ತದೆ. ಇದರ ಎಕ್ಸ್‌ಶೋರೂಂನ ಬೇಸಿಕ್ ಕಾರಿನ ಬೆಲೆ ₹7.99 ಲಕ್ಷದಿಂದ ಆರಂಭ. ವಿಲಾಸಿ ಫೀಚರ್ಸ್‌ಗಳ ಪಟ್ಟಿಯೇ ಈ ಕಾರಿನತ್ತ ಗ್ರಾಹಕರು ಹೆಚ್ಚು ಆಕರ್ಷಿತರಾಗಲು ಕಾರಣ. ಈ ಕಾರು ಎರಡು ಎಂಜಿನ್‌ಗಳ ಆಯ್ಕೆಯಲ್ಲಿ ಲಭ್ಯ. 1.2ಲೀ. ಟರ್ಬೊ ಪೆಟ್ರೋಲ್‌ ಎಂಜಿನ್‌ ಹಾಗೂ 1.5ಲೀ ಡೀಸೆಲ್ ಎಂಜಿನ್‌ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯ. ಅದರೊಳಗೂ 5 ಗೇರ್‌ನ ಮ್ಯಾನ್ಯುಯಲ್ ಗೇರ್‌, 6 ಸ್ಪೀಡ್‌ನ ಮ್ಯಾನ್ಯುಯಲ್ ಗೇರ್‌, 6 ಸ್ಪೀಡ್‌ನ ಎಎಂಟಿ ಹಾಗೂ 7 ಸ್ಪೀಡ್‌ನ ಡಿಸಿಟಿ ಆ್ಯಟೊಮ್ಯಾಟಿಕ್‌ ಗೇರ್‌ಬಾಕ್ಸ್‌ನಲ್ಲಿ ಲಭ್ಯ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ