ಬಹಳಾ ಹಿಂದೇನೂ ಅಲ್ಲ… ಕೆಲ ತಿಂಗಳ ಹಿಂದೆಯಷ್ಟೇ ಜಪಾನ್‌ನ ಕೆಲ ಕಾರು ತಯಾರಿಕಾ ಕಂಪನಿಗಳು ಹೊಸ ಮಾದರಿಯ ಕಂಬಶ್ಚನ್ ಎಂಜಿನ್ ಅಭಿವೃದ್ಧಿಪಡಿಸುತ್ತಿರುವ ಸುಳಿವು ನೀಡಿದ್ದವು. ಆದರೆ ಇದೀಗ ಟೊಯೊಟಾ ಆ ಎಂಜಿನ್ ಎಂಥದ್ದನ್ನು ಎಂಬದನ್ನು ಹೇಳಿದೆ. ಈ ಹೊಸ ಮಾದರಿಯ ಎಂಜಿನ್ ಹಲವು ಬಗೆಯ ಇಂಧನಗಳನ್ನು ಬಳಸಿ ಚಲಿಸುವ ಸಾಮರ್ಥ್ಯ ಹೊಂದಿದೆ.
2027ರಲ್ಲಿ ಜಾರಿಗೆ ಬರುವ ಯೂರೊ 7 ಪರಿಸರ ನಿಯಮಕ್ಕೆ ಸರಿಹೊಂದಬಲ್ಲ, ಕಡಿಮೆ ಇಂಗಾಲಯ ಹೊರಸೂಸುವ ಎಂಜಿನ್‌ಗಾಗಿ ಬಹು ಇಂಧನ ಮಾದರಿಯ ಹಾದಿಯನ್ನು ಜಪಾನ್‌ನ ಕಾರು ತಯಾರಿಕಾ ಕಂಪನಿಗಳು ಅನುಸರಿಸಿವೆ. ಇದರಲ್ಲಿ ಬ್ಯಾಟರಿ ಚಾಲಿತ, ಬ್ಯಾಟರಿ–ಪೆಟ್ರೋಲ್ ಎಂಜಿನ್ ಹೊಂದಿರುವ ಹೈಬ್ರಿಡ್, ನಂತರ ಇದೀಗ ಹೊಸ ಮಾದರಿಯ ಜಲಜನಕ ಆಧಾರಿತ ಇಂಧನ ಘಟಕಗಳ ಸ್ಥಾಪನೆ ಆರಂಭಗೊಂಡಿದೆ.
ಹಾಗಿದ್ದರೆ, ಇಂಥದ್ದೊಂದು ಬಹು ಇಂಧನ ಬಳಕೆಯ ಎಂಜಿನ್ ಅಭಿವೃದ್ಧಿ ಹೇಗಾಯಿತು ಎಂದು ನೋಡಿದರೆ, ಅದೊಂದು ರೋಚಕ ಘಟನೆಯೇ ಇದೆ.
ಟೊಯೊಟಾ ಕಂಪನಿಯು ತನ್ನ ರೇಸಿಂಗ್ ಕಾರು ಜಿಆರ್ ಕೊರೊಲ್ಲಾದಲ್ಲೊಂದು ಪ್ರಯೋಗ ನಡೆಸಿತು. ಜಲಜನಕ ತಂತ್ರಜ್ಞಾನ ಆಧಾರಿತ ಎಂಜಿನ್ ಉತ್ಪಾದಿಸುವ ಯೋಜನೆ ಹೊಂದಿದ್ದ ಕಂಪನಿ, ಉತ್ತಮ ಉಷ್ಣ ಸಾಮರ್ಥ್ಯ ಹೊಂದಿರುವ ಹಾಗೂ ಕಡಿಮೆ ಇಂಗಾಲಯ ಉಗುಳುವ ಗುರಿಯನ್ನು ನಿಗದಿಪಡಿಸಿತು. ಇದಕ್ಕಾಗಿ ಅದು ಆಯ್ದುಕೊಂಡ ಇಂಧನಗಳು ಸಿಂಥೆಟಿಕ್ ಇ–ಫ್ಯೂಯಲ್ಸ್, ಬಯೋಡೀಸೆಲ್ ಹಾಗೂ ಜಲಜನಕ.
ಟೊಯೊಟಾ ಹೇಳುವ ಪ್ರಕಾರ ಹೊಸ ತಲೆಮಾರಿನ ಎಂಜಿನ್ ಹಿಂದಿನ ಎಂಜಿನ್‌ಗಿಂತ ಶೇ 10ರಿಂದ 20ರಷ್ಟು ಗಾತ್ರದಲ್ಲಿ ಚಿಕ್ಕದು. ಆದರೆ ಅದೇ ಕಾಲಕ್ಕೆ ಹೆಚ್ಚು ಇಂಧನ ಕ್ಷಮತೆ ಹಾಗೂ ಅಧಿಕ ಶಕ್ತಿ ಉತ್ಪಾದಿಸುವ ಗುಣ ಹೊಂದಿದೆ. ಹೊಸ ಎಂಜಿನ್ ಹಲವು ಮಾದರಿಯ ಇಂಧನಗಳನ್ನು ಬಳಸಿ ಚಲಿಸಬಹುದು.
ಈ ಹೊಸ ಎಂಜಿನ್ 1.5ಲೀಟರ್ ಸಾಮರ್ಥ್ಯದ್ದಾಗಿದ್ದು, ಟರ್ಬೊಚಾರ್ಜ್ ಎಂಜಿನ್‌ಗಳಾಗಿವೆ. ಜತೆಗೆ 2.0 ಲೀಟರ್‌ನ ಟರ್ಬೊಚಾರ್ಜ್ ಯೂನಿಟ್ ಹೊಂದಿದೆ. ಹೊಸ ಎಂಜಿನ್ ಕಡಿಮೆ ಸ್ಟ್ರೋಕ್‌ಗಳೊಂದಿಗೆ ಕಡಿಮೆ ಟಾರ್ಕ್ ಉತ್ಪಾದಿಸುತ್ತದೆ. ಹಿಂದಿನ ಎಂಜಿನ್‌ನಂತೆ ಹೆಚ್ಚು ಟಾರ್ಕ್ ಉತ್ಪಾದಿಸಬರಬಹುದು. ಆದರೆ ಈ ಅಂತರವನ್ನು ಎಲೆಕ್ಟ್ರಿಕ್ ಮೋಟಾರ್ ತುಂಬುತ್ತದೆ. ಕಾರಿಗೆ ಅಗತ್ಯವಿರುವ ಶಕ್ತಿಯನ್ನು ಇದು ನೀಡುತ್ತದೆ ಎಂದು ಕಂಪನಿಯ ತಜ್ಞರು ಹೇಳಿರುವುದಾಗಿ ವರದಿಯಾಗಿದೆ.
ಯೂರೊ 7 ಜಾರಿಗೆ ಬರುವುದರೊಳಗಾಗಿ ಅಂದರೆ 2027ರ ಜುಲೈ 1ರೊಳಗೆ ಹೊಸ ಮಾದರಿಯ ಎಂಜಿನ್ ಅನ್ನು ಪರಿಚಯಿಸುವ ತವಕದಲ್ಲಿ ಜಪಾನ್ ಆಟೊ ದೈತ್ಯ ಸಂಸ್ಥೆ ನಿರತವಾಗಿದೆ.