ಟೊಯೊಟಾ, ಹ್ಯುಂಡೈ, ಟಾಟಾ ಮಾರಾಟದಲ್ಲಿ ಏರಿಕೆ; ಎಂ.ಜಿ., ಮಾರುತಿ ಬೇಡಿಕೆ ಇಳಿಕೆ

ಕಾರುಗಳು

ಟೊಯೊಟ, ಮಹೀಂದ್ರ ಆ್ಯಂಡ್‌ ಮಹೀಂದ್ರ, ಹುಂಡೈ, ಕಿಯಾ, ಟಾಟಾ ಮೋಟರ್ಸ್‌ನ ವಾಹನಗಳ ಸಗಟು ಮಾರಾಟವು ಮೇನಲ್ಲಿ ಏರಿಕೆಯಾಗಿದೆ. ಆದರೆ, ಎಂ.ಜಿ ಮೋಟರ್ಸ್‌, ಮಾರುತಿ ಸುಜುಕಿ ವಾಹನಗಳ ಮಾರಾಟದಲ್ಲಿ ಇಳಿಕೆಯಾಗಿದೆ.

ಮಾರುಕಟ್ಟೆಗೆ ಹೊಸ ಮಾದರಿಯ ವಾಹನಗಳ ಬಿಡುಗಡೆಯಿಂದಾಗಿ ಮಾರಾಟದ ಪ್ರಮಾಣ ಏರಿಕೆಯಾಗಿದೆ ಎಂದು ಕಂಪನಿಗಳು ಶನಿವಾರ ತಿಳಿಸಿವೆ.

ಟೊಯೊಟ: ಟೊಯೊಟ ಕಿರ್ಲೋಸ್ಕರ್‌ ಮೋಟರ್‌ನ (ಟಿಕೆಎಂ) 25,273 ವಾಹನಗಳು ಮಾರಾಟವಾಗಿವೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮಾರಾಟದಲ್ಲಿ ಶೇ 24ರಷ್ಟು ಏರಿಕೆ ಆಗಿದೆ. ಕಳೆದ ತಿಂಗಳು ದೇಶೀಯವಾಗಿ 23,959 ವಾಹನಗಳು ಮಾರಾಟವಾಗಿದ್ದರೆ, 1,314 ವಾಹನಗಳು ರಫ್ತಾಗಿವೆ.

ಮಹೀಂದ್ರ ಆ್ಯಂಡ್‌ ಮಹೀಂದ್ರ: ಮಹೀಂದ್ರ ಆ್ಯಂಡ್‌ ಮಹೀಂದ್ರ ವಾಹನದ ಸಗಟು ಮಾರಾಟದಲ್ಲಿ ಶೇ 17ರಷ್ಟು ಹೆಚ್ಚಳವಾಗಿದೆ. ಒಟ್ಟು 71,682 ವಾಹನಗಳು ಮಾರಾಟವಾಗಿವೆ. ದೇಶೀಯ ಪ್ರಯಾಣಿಕ ವಾಹನ ಮಾರಾಟದಲ್ಲಿ ಶೇ 31ರಷ್ಟು ಏರಿಕೆಯಾಗಿದ್ದು, 43,218 ವಾಹನ ಮಾರಾಟವಾಗಿವೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 32,886 ಮಾರಾಟವಾಗಿದ್ದವು. ರಫ್ತು ಪ್ರಮಾಣ ಶೇ 2ರಷ್ಟು ಏರಿಕೆಯಾಗಿದ್ದು, 2,671 ವಾಹನ ಮಾರಾಟವಾಗಿವೆ. ಟ್ರ್ಯಾಕ್ಟರ್‌ಗಳ ಒಟ್ಟು ಮಾರಾಟ 37,109 ಆಗಿದ್ದು, ಶೇ 9ರಷ್ಟು ಏರಿಕೆಯಾಗಿದೆ.

ಹುಂಡೈ: ಹುಂಡೈ ಮೋಟರ್‌ ಇಂಡಿಯಾ ಲಿಮಿಟೆಡ್‌ನ (ಎಚ್‌ಎಂಐಎಲ್‌) ಒಟ್ಟು 63,551 ವಾಹನಗಳು ಮಾರಾಟ ವಾಗಿದ್ದು, ಶೇ 7ರಷ್ಟು ಹೆಚ್ಚಳವಾಗಿದೆ. ಹಿಂದಿನ ಇದೇ ಅವಧಿಯಲ್ಲಿ 59,601 ವಾಹನ ಮಾರಾಟವಾಗಿದ್ದವು. ದೇಶೀಯ ವಾಹನ ಮಾರಾಟ 48,601 ರಿಂದ 49,151ಕ್ಕೆ ಏರಿಕೆಯಾಗಿದೆ. ರಫ್ತು ಪ್ರಮಾಣ 11 ಸಾವಿರದಿಂದ 14,400ಕ್ಕೆ ಹೆಚ್ಚಳವಾಗಿದೆ.

ಕಿಯಾ: ಕಿಯಾ ಇಂಡಿಯಾದ ಸಗಟು ವಾಹನ ಮಾರಾಟದಲ್ಲಿ ಶೇ 4ರಷ್ಟು ಏರಿಕೆಯಾಗಿದ್ದು, 19,500 ವಾಹನ ಮಾರಾಟವಾಗಿವೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 18,766 ಮಾರಾಟವಾಗಿದ್ದವು.

ಟಾಟಾ ಮೋಟರ್ಸ್‌: ಟಾಟಾ ಮೋಟರ್ಸ್‌ನ 76,766 ವಾಹನಗಳು ಮಾರಾಟವಾಗಿದ್ದು, ಶೇ 2ರಷ್ಟು ಏರಿಕೆಯಾಗಿದೆ. ದೇಶೀಯ ಮಾರಾಟ 73,448 ರಿಂದ 75,173ಕ್ಕೆ ಹೆಚ್ಚಳವಾಗಿದೆ. ವಿದ್ಯುತ್‌ಚಾಲಿತ ವಾಹನಗಳು ಸೇರಿದಂತೆ ಪ್ರಯಾಣಿಕ ವಾಹನಗಳ ಮಾರಾಟ 45,984 ರಿಂದ 47,075ಕ್ಕೆ ಏರಿಕೆಯಾಗಿದೆ. ವಾಣಿಜ್ಯ ವಾಹನ ಮಾರಾಟದಲ್ಲಿ ಶೇ 2ರಷ್ಟು ಹೆಚ್ಚಳವಾಗಿದ್ದು, 29,691 ಮಾರಾಟವಾಗಿವೆ.

ಎಂ.ಜಿ ಮೋಟರ್‌ ಇಂಡಿಯಾ ವಾಹನ ಮಾರಾಟ ಶೇ 5ರಷ್ಟು ಇಳಿಕೆಯಾಗಿದ್ದು, 4,769 ವಾಹನಗಳು ಮಾರಾಟವಾಗಿವೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 5,006 ವಾಹನ ಮಾರಾಟವಾಗಿದ್ದವು.

ಮಾರುತಿ ಸುಜುಕಿ: ಮಾರುತಿ ಸುಜುಕಿ ಇಂಡಿಯಾದ 1.74 ಲಕ್ಷ ವಾಹನಗಳು ಮಾರಾಟವಾಗಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮಾರಾಟದಲ್ಲಿ ಶೇ 2ರಷ್ಟು ಇಳಿಕೆಯಾಗಿದೆ. ದೇಶೀಯ ಪ್ರಯಾಣಿಕ ವಾಹನ ಮಾರಾಟದಲ್ಲಿ ಅಲ್ಪ ಏರಿಕೆಯಾಗಿದ್ದು, 1.43 ಲಕ್ಷದಿಂದ 1.44 ಲಕ್ಷಕ್ಕೆ ಮುಟ್ಟಿದೆ. ರಫ್ತು 26,477 ರಿಂದ 17,367ಕ್ಕೆ ಕುಸಿದಿದೆ ಎಂದು ಕಂಪನಿ ತಿಳಿಸಿದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ