ಕಾರುಗಳ ತಯಾರಿಸುವ ಐರೋಪ್ಯ ರಾಷ್ಟ್ರಗಳ ಕಂಪನಿಗಳು ಅತಿಯಾದ ಎಂಜಿನಿಯರಿಂಗ್ ಒಳಗೊಂಡ ವಾಹನಗಳನ್ನು ತಯಾರಿಸುತ್ತಿದ್ದು, ಇದು ಭಾರತಕ್ಕೆ ಅನಗತ್ಯ ಎಂಬ ಭಾವವನ್ನು ಈ ಕಂಪನಿಗಳು ಹೊಂದಿವೆ. ಇದೇ ಮನಸ್ಥಿತಿಯಲ್ಲಿರುವ ಫೋಕ್ಸ್ವ್ಯಾಗನ್ ಈಗ ಭಾರತದಲ್ಲಿ ಪಾಲುದಾರರನ್ನು ಹುಡುಕುತ್ತಿದೆ.
2 ಶತಕೋಟಿ ಅಮೆರಿಕನ್ ಡಾಲರ್ ಹೂಡಿದ್ದರೂ, ಭಾರತದ ಮಾರುಕಟ್ಟೆಯಲ್ಲಿ ಫೋಕ್ಸ್ವ್ಯಾಗನ್ ನಿರೀಕ್ಷೆಯಷ್ಟು ಉತ್ತಮವಾಗಿಲ್ಲ. ಭಾರತ ಎನ್ನುವುದು ಬೆಲೆ ಸಮರದ ಮಾರುಕಟ್ಟೆ. ಭಾರತದಲ್ಲಿರುವ ಕಾರು ತಯಾರಕರು ಹೊಸ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿವೆ. ಇಲ್ಲಿ ಅತಿಯಾದ ಎಂಜಿನಿಯರ್ ವಾಹನಗಳಿಗೆ ಬೇಡಿಕೆಯೇ ಇಲ್ಲದಂತಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸ್ಕೋಡಾ ಆಟೊ ಜಾಗತಿಕ ಸಿಇಒ ಕ್ಲಾಸ್ ಝೆಲ್ಮೆರ್, ‘ಕಳೆದ 20 ವರ್ಷಗಳಿಂದ ನಾವು ಭಾರತದಲ್ಲಿದ್ದೇವೆ. ಆದರೆ ನಮ್ಮನ್ನು ನಾನು ಸರಿಯಾಗಿ ಗುರುತಿಸಿಕೊಳ್ಳಲು ಮತ್ತು ದೊಡ್ಡ ಮಾರುಕಟ್ಟೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ನಾವು ಬೇರೆ ಮಾರ್ಗವನ್ನು ಹುಡುಕಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಭಾರತದಲ್ಲಿ ನಮಗೆ ಸರಿಯಾದ ಪಾಲುದಾರರು ಸಿಕ್ಕಲ್ಲಿ, ಪರಸ್ಪರ ಲಾಭವನ್ನು ಕಂಡುಕೊಳ್ಳಬಹುದು’ ಎಂದು ಇಟಿ ಆಟೊಗೆ ಹೇಳಿರುವುದಾಗಿ ವರದಿಯಾಗಿದೆ.
ಫೋಕ್ಸ್ವ್ಯಾಗನ್ನ ಈ ಆಯ್ಕೆಯಲ್ಲಿ ಮಹೀಂದ್ರಾ ಮುಂಚೂಣಿಯಲ್ಲಿದೆ ಎಂದು ಮೂಲಗಳು ಹೇಳಿವೆ. ಯುರೋಪ್ನ ಕಾರುಗಳು ಅತಿಯಾದ ಎಂಜಿನಿಯರ್ ಆಗಿರುತ್ತವೆ. ಭಾರತದ ಮಾರುಕಟ್ಟೆಗೆ ಇವುಗಳ ಅಗತ್ಯವಿಲ್ಲ. ಅತಿಯಾದ ಎಂಜಿನಿಯರಿಂಗ್ ಬೆಲೆ ಹೆಚ್ಚಳವೂ ಹೌದು. ಜತೆಗೆ ಹೈಬ್ರಿಡ್ ವಾಹನಗಳಿಗೆ ಸರ್ಕಾರವೂ ತೆರಿಗೆ ಕಡಿತ ಮಾಡಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.