ಜರ್ಮನಿಯ ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಬಹುಬೇಡಿಕೆಯ ವರ್ಟಸ್ ಹಾಗೂ ವಿಲಾಸಿ ಟಿಗ್ವಾನ್ ಕಾರುಗಳಲ್ಲಿ ಹೊಸ ಸೌಕರ್ಯಗಳನ್ನು ಅಳವಡಿಸಿದ್ದು, ಇದನ್ನು ಶೀಘ್ರದಲ್ಲಿ ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಕಂಪನಿಯ ಅಧಿಕಾರಿಗಳು ಹೇಳಿದ್ದಾರೆ.
ಪರ್ಫಾರ್ಮೆನ್ಸ್ ಕಾರುಗಳನ್ನು ಅಪೇಕ್ಷಿಸುವ ಫೋಕ್ಸ್‌ವ್ಯಾಗನ್ ಅಭಿಮಾನಿಗಳ ಬೇಡಿಕೆಗೆ ಅನುಗುಣವಾಗಿ ಜಾಗತಿಕ ಮಟ್ಟದಲ್ಲಿರುವ ಉತ್ಪನ್ನಗಳನ್ನು ಭಾರತದಲ್ಲಿ ಪರಿಚಯಿಸಲು ಕಂಪನಿ ಅಣಿಯಾಗಿದೆ.

ಇದರ ಭಾಗವಾಗಿ ಟಿಗ್ವಾನ್ ಆರ್–ಲೈನ್ ಮತ್ತು ಗಾಲ್ಫ್ ಜಿಟಿಐ ಕಾರುಗಳು ಭಾರತದ ರಸ್ತೆಗಿಳಿಯಲಿವೆ. ಭಾರತದಲ್ಲಿ ಫೋಕ್ಸ್‌ವ್ಯಾಗನ್ ಕಾರುಗಳ ಮಾರಾಟ ಶೇ 3ರಷ್ಟು ಹೆಚ್ಚಳವಾಗಿದೆ. ಜರ್ಮನ್ ಎಂಜಿನಿಯರಿಂಗ್‌ನ ಉತ್ಪನ್ನಗಳನ್ನು ನಮ್ಮ ಗ್ರಾಹಕರಿಗೆ ಇರುವಂತೆಯೇ ನೇರವಾಗಿ ತಲುಪಿಸಲು ನಾವು ಬದ್ಧರಾಗಿದ್ದೇವೆ ಎಂದು ಫೋಕ್ಸ್‌ವ್ಯಾಗನ್ ಇಂಡಿಯಾದ ಬ್ರ್ಯಾಂಡ್ ಡೈರೆಕ್ಟರ್ ಆಶೀಶ್ ಗುಪ್ತಾ ತಿಳಿಸಿದ್ದಾರೆ.
2 ಲೀಟರ್ ಎಂಜಿನ್ ಹೊಂದಿರುವ ಈ ಕಾರುಗಳು ಪೆಟ್ರೋಲ್ ಮಾದರಿಯನ್ನು ಮಾತ್ರ ಹೊಂದಿವೆ. ಫೋಕ್ಸ್‌ವ್ಯಾಗನ್ ಗಾಲ್ಫ್ ಜಿಟಿಐ ₹52 ಲಕ್ಷ ಹಾಗೂ ಟಿಗ್ವಾನ್ ಆರ್ ಲೈನ್ ₹38 ಲಕ್ಷ ಬೆಲೆಯದ್ದು ಎಂದು ಸದ್ಯ ಅಂದಾಜಿಸಲಾಗಿದೆ. 2025ರ ದ್ವಿತೀಯ ತ್ರೈಮಾಸಿಕದಲ್ಲಿ ಈ ಕಾರು ಬಿಡುಗಡೆಯಾಗಲಿದೆ.